ನಿಮ್ಮ ಧನವನ್ನು ನಾಶಮಾಡುವ 7 ಹವ್ಯಾಸಗಳು (ಹಾಗೂ ಅವುಗಳಿಂದ ಮುಕ್ತವಾಗುವುದು ಹೇಗೆ?)

If you’re still unclear on how to set up your cloud kitchen from home or whether you need a physical outlet, we’ve created a full step-by-step launch plan in How to Start a Profitable Cloud Kitchen from Home in India (A Complete Beginner’s Guide) — which covers everything you need to get operational.

ಒಳ್ಳೆಯ ಆದಾಯವಿದೆ, ಉಳಿತಾಯದ ಉದ್ದೇಶವಿದೆ, ಆದರೆ ಏನೋ ಮಾಯೆಯಂತೆ ಹಣ ಕೈ ತಪ್ಪಿ ಹೋಗುತ್ತಾ ಇದೆ ಎಂದಾದರೆ — ಸಮಸ್ಯೆ ನಿಮ್ಮ ಆದಾಯದಲ್ಲಿಲ್ಲ… ಅದು ನಿಮ್ಮ ಹವ್ಯಾಸಗಳಲ್ಲಿ ಇದೆ.

ಹಣವನ್ನು ಗಳಿಸುವುದಕ್ಕಿಂತ ಅದನ್ನು ಉಳಿತಾಯ ಮಾಡುವುದು, ಸೂಕ್ತವಾಗಿ ಹೂಡಿಕೆ ಮಾಡುವುದು, ಮತ್ತು ಸಮಯೋಚಿತ ನಿರ್ವಹಣೆ ಮಾಡುವುದು ನಿಜವಾದ ಹಣಕಾಸು ಶಿಸ್ತಿನ ಲಕ್ಷಣ.

ಆದರೆ ಕೆಲವೊಮ್ಮೆ ನಾವು ತಿಳಿಯದೇ ನಮ್ಮಕೆಲ ಹವ್ಯಾಸಗಳು ನಮ್ಮ ಸಂಪತ್ತನ್ನು ವಿನಾಶಕ್ಕೆ ಒಯ್ಯುತ್ತವೆ.

ಈ ಲೇಖನದಲ್ಲಿ, ನೀವು ದಿನವೂ ಮಾಡುವ (ಅಥವಾ ಗಮನಿಸದ) 7 ಹವ್ಯಾಸಗಳು ನಿಮ್ಮ ಹಣವನ್ನು ಹೇಗೆ ನಿಧಾನವಾಗಿ ನಾಶಮಾಡುತ್ತಿವೆ ಎಂಬುದನ್ನು ತಿಳಿದುಕೊಳ್ಳೋಣ — ಜೊತೆಗೆ ಅವುಗಳಿಂದ ಮುಕ್ತವಾಗಲು ಸರಳ ಹಾಗೂ ಪರಿಣಾಮಕಾರಿ ಮಾರ್ಗಗಳನ್ನು ಸಹ ಅರಿತುಕೊಳ್ಳೋಣ.

ಹಣದ ಹವ್ಯಾಸಗಳು ನಿಮ್ಮ ಸಂಪತ್ತಿಗೆ ಹೇಗೆ ಧಕ್ಕೆ ನೀಡುತ್ತವೆ?

ನಮ್ಮ ಜೀವನಶೈಲಿ, ಆಲೋಚನೆಗಳ ವಿಧಾನ, ಮತ್ತು ಹಣದ ಬಗ್ಗೆ ನಾವು ತೆಗೆದುಕೊಳ್ಳುವ ನಿರ್ಧಾರಗಳು — ಇವೆಲ್ಲವೂ ನಮ್ಮ ಆರ್ಥಿಕ ಸ್ಥಿತಿಗೆ ನೇರವಾಗಿ ಪ್ರಭಾವ ಬೀರುತ್ತವೆ. ಬಹುಷಃ ನೀವು ಹೆಚ್ಚಿನ ಆದಾಯ ಪಡೆದರೂ, ತಿಂಗಳು ಕೊನೆಗೆ ಖಾಲಿ ಖಾತೆ ನೋಡಿ ನೊಂದುಕೊಳ್ಳಬಹುದು. ಈ ಹವ್ಯಾಸಗಳನ್ನು ಗುರುತಿಸಿ ತಿದ್ದಿದರೆ ಮಾತ್ರವೇ, ನೀವು ನಿಮ್ಮ ಸಂಪತ್ತನ್ನು ರಕ್ಷಿಸಬಹುದು.

ಈ ಲೇಖನದಲ್ಲಿ, ಅಂತಹ 7 ಸಾಮಾನ್ಯ ಹಣವೊಂದಿಗಿನ ತಪ್ಪು ಹವ್ಯಾಸಗಳನ್ನು ತಿಳಿದುಕೊಳ್ಳೋಣ — ಮತ್ತು ಅವುಗಳಿಂದ ಮುಕ್ತರಾಗುವುದು ಹೇಗೆ ಎಂಬುದು ತಿಳಿಯೋಣ.

ಹವ್ಯಾಸ -1: ಏನಾದರೂ ತಕ್ಷಣ ಖರೀದಿಸಬೇಕು

ಹೊರಗೆ ಹೊಟೇಲ್ ಹೋಗೋಣ, ಹೊಸ ಬ್ಯಾಗ್ ಬೇಕು, ಸೆಲ್‌ನಲ್ಲಿದೆ ಅಂತ ಮೊಬೈಲ್ ಆರ್ಡರ್ — ಇವೆಲ್ಲಾ ಕ್ಷಣಿಕ ಖುಷಿಗೆ ಹಣವನ್ನು ನಾಶಮಾಡುವ ಹವ್ಯಾಸಗಳು. ಈ ರೀತಿಯ ತಕ್ಷಣದ ಖರ್ಚುಗಳು ನಿಮ್ಮ ಮಾಸಿಕ ಬಜೆಟ್‌ನ ಮೇಲೆ ಭಾರ ಬೀರುತ್ತವೆ ಮತ್ತು ಉಳಿತಾಯಕ್ಕೆ ಅವಕಾಶವೇ ಕೊಡುವುದಿಲ್ಲ.

ಈ ಹವ್ಯಾಸದಿಂದ ಆಗುವ ಸಮಸ್ಯೆಗಳು:
  • ತಿಂಗಳ ಕೊನೆಯ ಭಾಗದಲ್ಲಿ ಹಣವಿಲ್ಲದ ಗೊಂದಲ

  • ಉಳಿತಾಯಕ್ಕೆ ಅವಕಾಶವಿಲ್ಲ

  • ಮುಂಗಡ ಯೋಜನೆಗಳು ವಿಫಲ

  • ಅನಿವಾರ್ಯವಾಗಿ ಸಾಲ ತೆಗೆದುಕೊಳ್ಳಬೇಕಾಗ ಬಹುದು

  • ಅವಶ್ಯ ವೆಚ್ಚಗಳಿಗೆ ಹಣ ಉಳಿಯದ ಸ್ಥಿತಿ

ಈ ಅಭ್ಯಾಸದಿಂದ ಮುಕ್ತವಾಗಲು ಉಪಾಯಗಳು:
  1. ೨೪ ಗಂಟೆಗಳ ಕಾಯ್ದಿರಿಕೆ ನಿಯಮ
    ನೀವು ಖರೀದಿ ಮಾಡಲು ಇಚ್ಛೆಪಟ್ಟಾಗ — ತಕ್ಷಣ ಖರೀದಿಸಬೇಡಿ.
    ಅದಕ್ಕೆ ಒಂದು ದಿನದ ಸಮಯ ಕೊಡಿ. ಇದರಿಂದ ನೀವು ಅದು ನಿಜವಾಗಿಯೂ ಬೇಕೇ ಎಂಬುದನ್ನು ವಿಮರ್ಶೆ ಮಾಡಬಹುದು.

  2. ಬಜೆಟ್ ಪಟ್ಟಿ ತಯಾರಿಸಿ
    ತಿಂಗಳಿಗೆ ಯಾವ ಯಾವ ಖರ್ಚುಗಳಿಗೆ ಹಣವನ್ನು ಬಳಸಬೇಕು ಎಂಬ ವಿವರವಾದ ಪಟ್ಟಿ ತಯಾರಿಸಿ.
    ಇದರ ಹೊರಗೆ ಖರ್ಚು ಮಾಡುವ ಮೊದಲು ಎರಡು ಸಲ ಯೋಚನೆ ಮಾಡಿ.

  3. ಮೊಬೈಲ್ ನೋಟಿಫಿಕೇಶನ್‌ಗಳು ನಿಷ್ಕ್ರಿಯಗೊಳಿಸಿ
    ಶಾಪಿಂಗ್ ಆಪ್‌ಗಳ ನೋಟಿಫಿಕೇಶನ್‌ಗಳು ನಿಮಗೆ “ಇದು ಲಾಸ್ಟ್ ಡೇ ಡೀಲ್” ಎಂಬ ಒತ್ತಡ ಉಂಟುಮಾಡಬಹುದು.
    ಇವು ನಿಮ್ಮ ನಿರ್ಧಾರಕ್ಕೆ ಬಾಹ್ಯ ಪ್ರಭಾವ ಬೀರುತ್ತವೆ.

  4. ನಿಜಕ್ಕೂ ಬೇಕು ಅಥವಾ ಬೇಡವೇ? ಎಂಬ ಪ್ರಶ್ನೆ ಕೇಳಿ
    ಖರೀದಿ ಮಾಡುವ ಮೊದಲು — “ಇದು ನನಗೆ ಬೇಕೆ ಅಥವಾ ತಾತ್ಕಾಲಿಕ ಆಸೆ ಅಷ್ಟೆನಾ?” ಎಂಬುದನ್ನು ಮನಸ್ಸಿನಲ್ಲಿ ಪ್ರಶ್ನಿಸಿ.

ತಕ್ಷಣದ ಖರೀದಿ ಸಂತೋಷ ಕೊಡಬಹುದು, ಆದರೆ ಅದು ನಿಮ್ಮ ಭವಿಷ್ಯದ ನೆಮ್ಮದಿಯನ್ನು ಕಸಿದುಕೊಳ್ಳಬಹುದು.

ನಿಮ್ಮ ಹಣದ ಮೇಲೆ ನಿಯಂತ್ರಣ ಇರಲಿ, ಅದು ನಿಮ್ಮನ್ನು ನಿಯಂತ್ರಿಸದಂತೆ ನೋಡಿಕೊಳ್ಳಿ.

ಹವ್ಯಾಸ -2: ಉಳಿತಾಯವೇ ಇಲ್ಲದ ಜೀವನಶೈಲಿ

“ನೀವು ಎಷ್ಟು ಸಂಪಾದಿಸುತ್ತೀರಾ?” ಎಂಬ ಪ್ರಶ್ನೆಗಿಂತ, “ನೀವು ಎಷ್ಟು ಉಳಿಸುತ್ತೀರಾ?” ಎಂಬುದು ಹೆಚ್ಚು ಮಹತ್ವದ ಪ್ರಶ್ನೆ.
ಆದರೆ ಬಹುತೇಕರು ವೇತನ ಬಂದ ಕೂಡಲೇ ಖರ್ಚಿನಲ್ಲಿ ತೊಡಗಿದರೆ — ಉಳಿಯುವುದು ಎಲ್ಲಿ?

ಕೆಲವರು ಯೋಚಿಸುತ್ತಾರೆ, “ಈ ತಿಂಗಳು ತಾನೇ ಒಗ್ಗಟ್ಟಾಗಿ ಖರ್ಚು ಮಾಡೋಣ, ಮುಂದಿನ ತಿಂಗಳು ಉಳಿತಾಯ ಮಾಡ್ತೀನಿ.”
ಆದರೆ ಈ ‘ಮುಂದಿನ ತಿಂಗಳು’ ಎಂದಿಗೂ ಬರುವುದಿಲ್ಲ.

ಉಳಿತಾಯವಿಲ್ಲದ ಜೀವನದಿಂದ ಆಗುವ ಸಮಸ್ಯೆಗಳು:
  • ತುರ್ತು ಸಂದರ್ಭದಲ್ಲಿ ಸಾಲ ಅಥವಾ ಕ್ರೆಡಿಟ್‌ಕಾರ್ಡ್ ಅವಲಂಬನೆ

  • ನಿಲ್ಲದ ದೈನಂದಿನ ಹಣದ ಒತ್ತಡ

  • ಉದ್ದೇಶಿತ ಗುರಿಗಳಿಂದ ದೂರ (ಮನೆ, ವಿದ್ಯಾಭ್ಯಾಸ, ನಿವೃತ್ತಿ)

  • ಸಂಪತ್ತಿಲ್ಲದ ಅಸ್ಥಿರ ಭವಿಷ್ಯ

ಈ ಹವ್ಯಾಸದಿಂದ ಮುಕ್ತವಾಗಲು ಸರಳ ಸಲಹೆಗಳು:
  1. ಆದಾಯ ಬಂದ ತಕ್ಷಣವೇ ಉಳಿತಾಯ ಮಾಡಿ 
    ವೇತನ ಬಂದ ತಕ್ಷಣ, ಖರ್ಚು ಮಾಡುವ ಮುನ್ನವೇ ಒಂದು ಭಾಗವನ್ನು ಉಳಿತಾಯ ಖಾತೆಗೆ ವರ್ಗಾಯಿಸಿ. ಆದಾಯದ ಕನಿಷ್ಠ ೨೦% ಉಳಿತಾಯಕ್ಕೆ ಮೀಸಲಾಗಿರಲಿ.

  2. ತುರ್ತು ನಿಧಿಗೆ ಪ್ರಥಮ ಆದ್ಯತೆ ನೀಡಿ
    ಕನಿಷ್ಠ ಮೂರು ತಿಂಗಳ ಖರ್ಚಿಗೆ ಸಮಾನ ಮೊತ್ತದ ತುರ್ತು ನಿಧಿ ಇರಲಿ. ತುರ್ತು ಪರಿಸ್ಥಿತಿಯಲ್ಲಿ ಸಾಲ ಬೇಡ, ತಕ್ಷಣ ನೆರವಾಗುವಷ್ಟು ಹಣವಿರಲಿ.

  3. ಉಳಿತಾಯಕ್ಕಾಗಿ ಸ್ವತಂತ್ರ ಖಾತೆ
    ಒಂದು ಪ್ರತ್ಯೇಕ ಉಳಿತಾಯ ಖಾತೆ ಇರಿಸಿ. ಆ ಹಣವನ್ನು ಖರ್ಚು ಮಾಡುವ ಲೆಕ್ಕದಲ್ಲಿ ಸೇರಿಸಬೇಡಿ. ಇದರಿಂದ ಹಣವನ್ನು ಅಸಡ್ಡೆಗೊಳಿಸುವುದು ಕಡಿಮೆ.

  4. ದೃಢ ಉಳಿತಾಯ
    “ಇದಕ್ಕೆ ₹೫೦ ಉಳಿಸೋಣ, ಅದಕ್ಕೆ ₹೨೦” ಎಂಬುದರಿಂದ ಗುರಿ ಸಾಧನೆ ಆಗಲ್ಲ. ನಿಮ್ಮ ಉಳಿತಾಯದ ಗುರಿ ಸ್ಪಷ್ಟವಾಗಿರಲಿ (ಉದಾ: ೧ ಲಕ್ಷ ತುರ್ತು ನಿಧಿ, ೫ ಲಕ್ಷ ಮಕ್ಕಳ ಶಿಕ್ಷಣ ಮುಂತಾದವು).

ಉಳಿತಾಯ ಎನ್ನುವುದು ಕೇವಲ ಹಣವನ್ನು ಪಕ್ಕವಿಡುವುದು ಅಷ್ಟೆ ಅಲ್ಲ; ಅದು ನಮ್ಮ ಭದ್ರ ಭವಿಷ್ಯಕ್ಕಾಗಿ ಕಟ್ಟುವ ಆರ್ಥಿಕ ಗೂಡು.
ಇದು ಕಷ್ಟದ ಸಮಯದಲ್ಲಿ ನೆರವಾಗುವ ಅಜ್ಞಾತ ಮಿತ್ರ, ಹೊಸ ಅವಕಾಶಗಳನ್ನು ಅಲಿಂಗಿಸುವ ಶಕ್ತಿ, ಮತ್ತು ಧೈರ್ಯದಿಂದ ನಿರ್ಧಾರ ತೆಗೆದುಕೊಳ್ಳುವ ಆತ್ಮವಿಶ್ವಾಸ.

ವೈದ್ಯಕೀಯ ತುರ್ತು ಪರಿಸ್ಥಿತಿಗಳಾಗಲಿ, ಉದ್ಯೋಗ ನಷ್ಟವಾಯಿತೆಂಬ ಆತಂಕವಿರಲಿ, ಅಥವಾ ಪುಟ್ಟ ಕನಸುಗಳನ್ನು ನಿಜಗೊಳಿಸಬೇಕೆಂಬ ಹಂಬಲವಿರಲಿ — ಉಳಿತಾಯವಿಲ್ಲದೆ ನಾವು ಆರ್ಥಿಕವಾಗಿ ಭದ್ರವಾಗಿರಲು ಸಾಧ್ಯವಿಲ್ಲ.

ಹವ್ಯಾಸ -3: ಖರ್ಚಿಗಾಗಿ ಸಾಲದ ಮೇಲೆ ಅವಲಂಭನೆ

“ಕ್ರೆಡಿಟ್ ಕಾರ್ಡ್ ಇದೆ!”, “ಫೈನಾನ್ಸ್‌ನಲ್ಲಿ ಕೊಡ್ತಾರೆ!”, “ಇನ್ನೊಂದು EMI ಏನಾಗಲ್ಲ!” — ಈ ಮಾತುಗಳು ಇಂದಿನ ತಲೆಮಾರಿಗೆ ಸಾಮಾನ್ಯವಾಗಿಬಿಟ್ಟಿವೆ.

ಆದಾಯ ಬರೋದೆ ಮುಂಚೆ ಖರ್ಚು ಮಾಡೋ ಚಟವೇ ಸಾಲದ ಚಕ್ರದಲ್ಲಿ ಸಿಕ್ಕಿಕೊಳ್ಳುವ ಪ್ರಾರಂಭ.
ಇದು ಮೊದಲಿಗೆ ಸುಲಭವಾಗಿ ಕಾಣಿಸುತ್ತದೆ, ಆದರೆ ಕೊನೆಗೆ ಸಂಕಷ್ಟದ ದಾರಿಯಾಗುತ್ತದೆ.

ಸಾಲದ ಅಪಾಯಗಳು – ನಿಮ್ಮ ಸಂಪತ್ತಿಗೆ ನಿಜವಾದ ಬಂಡಿ ಕಲ್ಲು:
  • ಮಾಸಿಕ ಆದಾಯದ ಬೃಹತ್ ಭಾಗ ಸಾಲ ತೀರಿಸಲು ಹೋಗುತ್ತದೆ

  • ಸಾಲದ ಮೇಲೆ ಬಡ್ಡಿ ಬಡ್ಡಿಗೆ ಬೆಳೆದಂತೆ ಜಾಸ್ತಿಯಾಗುತ್ತದೆ

  • ಕ್ರೆಡಿಟ್ ಸ್ಕೋರ್ ಹಾಳಾಗುತ್ತದೆ – ಮುಂದಿನ ಹಣಕಾಸು ಅವಕಾಶಗಳಿಗೆ ತಡೆ

  • ಮನಃಶಾಂತಿ ಹಾಳು – ಋಣದ ಒತ್ತಡದಿಂದ ಅಲ್ಪಮಾನಸಿಕ ತೊಂದರೆಗಳು

  • ಸಾಲದಿಂದ ಮುಕ್ತಗೊಳ್ಳೋ ಸಮಯದಲ್ಲಿ ಹೊಸ ಸಾಲ ಮತ್ತೆ ಹಿಡಿಯುವುದು – ಚಕ್ರವ್ಯೂಹ

ಈ ಅಭ್ಯಾಸದಿಂದ ಮುಕ್ತಗೊಳ್ಳಲು ಸರಳ ಪರಿಹಾರಗಳು
  1. ಸಾಲ ತೆಗೆದುಕೊಳ್ಳೋದು – ಅಂತಿಮ ಆಯ್ಕೆ ಆಗಲಿ
    ಮೊದಲು ಉಳಿತಾಯ, ನಂತರ ಸಹಾಯ, ನಂತರವೇ ಸಾಲ. ಅದು ಸಹ ಅವಶ್ಯಕತೆ ಇದ್ದಾಗ ಮಾತ್ರ.

  2. ಒಂದು ಸಮಯದಲ್ಲಿ ಒಂದೇ ಸಾಲ ಇರಲಿ
    ಕ್ರೆಡಿಟ್ ಕಾರ್ಡ್, ವಯಕ್ತಿಕ ಲೋನ್, ಓವರ್ ಡ್ರಾಫ್ಟ್, BNPL – ಎಲ್ಲವನ್ನೂ ಸೇರಿಸಿದ್ರೆ ನಿಮ್ಮ ಆದಾಯ ಸಾಲ ತೀರಿಸುವತ್ತ ಹೋಗಬಹುದು!

  3. ಅನವಶ್ಯಕ ಖರೀದಿಗಳಿಗೆ “ಹೌದು” ಹೇಳಬೇಡಿ
    ಜೀವನ ಶೈಲಿ ಬೆಳೆದರೂ, ನಿಮ್ಮ ಬಜೆಟ್‌ನ ಒಳಗೆ ಇರಲಿ. ತಾತ್ಕಾಲಿಕ ಖುಷಿಗೆ ದೀರ್ಘಕಾಲದ ಸಂಕಷ್ಟ ತರಬೇಡಿ.

  4. ಅತ್ತಿ ಸಾಲ ತೀರಿಸು, ಹೊಸದನ್ನು ತಾಕು
    ಒಂದು ಸಾಲ ಮುಗಿಸಿದ ಮೇಲೆ ಇನ್ನೊಂದು ಬಗ್ಗೆ ಯೋಚಿಸಿ. ಕ್ರೆಡಿಟ್ ಕಾರ್ಡ್ ಮೂಲಕ ಕ್ರೆಡಿಟ್ ಕಂತು ತೀರಿಸೋದು = ಮಾರಕ ವ್ಯವಹಾರ.

ಸಾಲ ತಕ್ಷಣ ಉಪಯುಕ್ತವಾಗಿ ತೋರುತ್ತದೆ. ಆದರೆ ಅದು ನಿಂತುಹೋಗದ ‘ಬಡ್ಡಿಯ ಬಂಡಿ’. ನಾವು ಆ ಬಂಡಿಯ ಹಿಂದೆ ಓಡ್ತಿದ್ದೇವೆ – ಇದು ನಾವು ಸಂಪತ್ತು ಕಟ್ಟಿಕೊಳ್ಳುವ ಬದಲು ಅದನ್ನು ನಾಶ ಮಾಡುವ ದಾರಿ.

ಹವ್ಯಾಸ -4: ಹೆಚ್ಚು ಆದಾಯ = ಹೆಚ್ಚು ಖರ್ಚು ಎಂಬ ನಂಬಿಕೆ

ಹೊಸ ಕೆಲಸ, ವೇತನ ಜಾಸ್ತಿ, ಬೋನಸ್ ಬಂದ್ಮೇಲೆ ನಾವು ಎನು ಮಾಡ್ತೀವಿ?

ಹಳೆಯ ಫೋನ್ ಬದಲಿಗೆ ಹೊಸದು,  ವಾರಕ್ಕೊಮ್ಮೆ ಔಟ್‌ಡೋರ್ ಡಿನ್ನರ್ — ಆದಾಯ ಹೆಚ್ಚಾದರೆ ಖರ್ಚು ಕೂಡಾ ತಾನಾಗಿಯೇ ಜಾಸ್ತಿಯಾಗಿಬಿಡುತ್ತೆ. ಇದನ್ನು ಆರ್ಥಿಕ ತಜ್ಞರು ಲೈಫ್ಸ್ಟೈಲ್ ಇನ್‌ಫ್ಲೇಶನ್ (Lifestyle Inflation) ಎನ್ನುತ್ತಾರೆ. ಅಂದರೆ ಜೀವನಶೈಲಿಯ ಖರ್ಚು, ನಮ್ಮ ಆದಾಯ ಹೆಚ್ಚಾದಂತೆ ಹೆಚ್ಚಾಗುತ್ತೆ — ಆದರೆ ಉಳಿತಾಯ ಅಲ್ಲಿ ನಿಂತೇ ಬಿಡುತ್ತೆ!

ಈ ನಂಬಿಕೆಯ ಪರಿಣಾಮಗಳು:
  • ಉಳಿತಾಯ ಪ್ರಮಾಣವಿಲ್ಲದೆ ಬದುಕು ಸಾಗುವುದು
    ವೇತನ ಎಷ್ಟೇ ಹೆಚ್ಚಾದರೂ ತಿಂಗಳ ಕೊನೆಗೆ ಖಾಲಿ ಖಾತೆ!

  • ಸ್ವಂತ ಗುರಿಗಳನ್ನು ಸಾಧಿಸಲು ಸಾಧ್ಯವಿಲ್ಲ
    ಮನೆ ಖರೀದಿ, ಉದ್ಯಮ ಪ್ರಾರಂಭ, ಅಥವಾ ನಿರ್ವಹಣಾ ನಿಧಿ ರೂಪಿಸುವ ಗುರಿಗಳು —
    ಈ ಎಲ್ಲಾ ಕನಸುಗಳು ಕನಸಾಗಿಯೇ ಉಳಿಯುತ್ತವೆ.

  • ಹಳೆಯ ಬದುಕಿಗೆ ಹಿಂದಿರುಗಲು ಅಸಾಧ್ಯತೆ
     ಜೀವನಶೈಲಿ ನಿಮಗೆ ಸರಳ ಜೀವನಕ್ಕೆ ಹಿಂದಿರುಗಲು ಬಿಡುವುದಿಲ್ಲ.

ಈ ಹವ್ಯಾಸದಿಂದ ಮುಕ್ತವಾಗಲು ಉಪಾಯಗಳು:
  1. “ಆದಾಯ ಹೆಚ್ಚಾಗಿದ್ರೆ, ಉಳಿತಾಯ ಹೆಚ್ಚು” ಎಂಬ ನಿಯಮ ತಯಾರಿಸಿಕೊಳ್ಳಿ
    ವೆಚ್ಚ ಹೆಚ್ಚಿಸುವ ಬದಲು, ಪ್ರತಿ ಹೆಚ್ಚಿದ ಆದಾಯದ ಕನಿಷ್ಠ ೫೦% ಉಳಿತಾಯಕ್ಕೆ ಇರಿಸಿ.

  2. ಬಜೆಟ್ ಮರುಪರಿಶೀಲನೆ ಮಾಡಿ – ಪ್ರತಿ ಮೂರು ತಿಂಗಳಿಗೊಮ್ಮೆ
    ಖರ್ಚುಗಳು ಎಲ್ಲಿ ಹೆಚ್ಚಾಗುತ್ತಿದೆ ಅಂತ ಗಮನಿಸಿ. ಅದರಲ್ಲಿ ಕಡಿತ ಮಾಡುವ ದಾರಿ ನೋಡಿ.

  3. “ಬೆಲೆ ಬರುವ ಸಂತೋಷ” ಮತ್ತು “ಬೆಲೆ ಇರುವ ಖುಷಿ” ತಾರತಮ್ಯ ತಿಳಿಯಿರಿ
    ಖರೀದಿ ಮಾಡಿದ ಹೊಸ ಉಡುಗೆಗಳ ಖುಷಿ ಕೆಲವು ಗಂಟೆಗಳೇ ಇರುತ್ತೆ. ಆದರೆ ಉಳಿತಾಯದಿಂದ ದೊರಕುವ ನೆಮ್ಮದಿ ದೀರ್ಘಕಾಲ ಉಳಿಯುತ್ತದೆ.

  4. ಇಮ್ಮಡಿಗೊಳಿಸಿದ ಲೈಫ್ಸ್ಟೈಲ್ ಮುಕ್ತಾಯವಾಗಲಿ – ಸರಳ ಬದುಕು ಶ್ರೇಷ್ಠ ಬದುಕು
    ಸದಾ ಹೆಜ್ಜೆ ಮುಂದೆ ಇಡುವ ಹೋರಾಟದ ಬದಲು, ಸಮತೋಲಿತ ಬದುಕು ಇಟ್ಟುಕೊಳ್ಳಿ.

“ನಾನು ಹೆಚ್ಚು ಸಂಪಾದಿಸುತ್ತಿದ್ದೀನಿ, ಹಾಗಾಗಿ ಹೆಚ್ಚು ಖರ್ಚು ಮಾಡಬಹುದು” ಎನ್ನುವ ನಂಬಿಕೆ – ಸಂಪತ್ತಿಗೆ  ವೈರಿಯಾಗಬಹುದು.

ಆದಾಯದೊಂದಿಗೆ ಜವಾಬ್ದಾರಿ ಕೂಡಾ ಜಾಸ್ತಿಯಾಗಬೇಕು.

ಹವ್ಯಾಸ -5: ಬಜೆಟ್ ತಯಾರಿಸುವ ಧ್ಯಾನವಿಲ್ಲ

ಹಣವನ್ನು ಹೇಗೆ ಸಂಪಾದಿಸಬೇಕು ಎಂಬ ಪ್ರಶ್ನೆಗೆ ಬಹುತೇಕರು ಉತ್ತರ ಕೊಡಬಹುದು. ಆದರೆ ಹಣ ಎಲ್ಲಿ ಖರ್ಚಾಗಿದೆ?, ಎಂಬುವುದರ ಬಗ್ಗೆ ಉತ್ತರ ಕೊಡುವವರು ತುಂಬಾ ಕಡಿಮೆ. ತಿಂಗಳ ಆರಂಭದಲ್ಲಿ ವೇತನ ಬರುತ್ತದೆ, ಆದರೆ ತಿಂಗಳ ಕೊನೆಗೆ ಖಾತೆಯಲ್ಲೇನೂ ಇಲ್ಲ. ಈ ನಡುವೆ ಯಾವ ಖರ್ಚು ಎಲ್ಲಿ ಹೇಗೆ ಆಯಿತು ಎಂಬುದು ಗೊತ್ತಿಲ್ಲ.

ಈಗೊಂದು ಪ್ರಶ್ನೆ ಕೇಳಿಕೊಳ್ಳಿ —
ನೀವು ನಿಮ್ಮ ಪ್ರತಿದಿನದ ಖರ್ಚುಗಳನ್ನು ಎಷ್ಟು ಮಟ್ಟಿಗೆ ಗಮನಿಸುತ್ತೀರಿ?

ಹೆಚ್ಚು ಜನರು ಬಜೆಟ್ ತಯಾರಿಸುವುದನ್ನು ಸಮಯದ ವ್ಯರ್ಥ ಅಥವಾ ತಾಳ್ಮೆಯ ಕೊರತೆ ಅನ್ನೋ ಕಾರಣದಿಂದ ತಪ್ಪಿಸಿಕೊಳ್ಳುತ್ತಾರೆ.

ಬಜೆಟ್ ಇಲ್ಲದ ಜೀವಿತದ ಪರಿಣಾಮಗಳು:
  1. ಖರ್ಚು ಮೇಲೆ ಸಂಪೂರ್ಣ ನಿಯಂತ್ರಣ ಇಲ್ಲದ ಪರಿಸ್ಥಿತಿ
    ಯಾವ ಖರ್ಚು ಅನಿವಾರ್ಯ? ಯಾವುದು ಇಚ್ಛೆಯದು? ತಿಳಿಯದೆ ಹಣ ಹರಿದುಹೋಗುತ್ತದೆ.

  2. ಉಳಿತಾಯದ ಕಡೆಗೆ ಕನಿಷ್ಟ ಗಮನವಿಲ್ಲ
    ಎಲ್ಲವೂ ಖರ್ಚಾಗಿ ಹೋಗುತ್ತದೆ. ಉಳಿಯಲ್ಲ. ಮುಂದಿನ ಗುರಿಗಳಿಗೆ ಬಂಡವಾಳ ಸಿಕ್ಕೋದಿಲ್ಲ.

  3. ಸಾಲ ತೀರಿಸಲಾಗದ ಗೊಂದಲದ ಸ್ಥಿತಿ
    EMI ಗಳು ಗಡಿಗೆ ಪೂರ್ತಿ ಹೊತ್ತಿರುತ್ತವೆ.  ಸಾಲಗಳು ಶಾಶ್ವತ ನೋವಿಗೆ ಮಾರ್ಪಡುತ್ತವೆ.

  4. ಅನಿರೀಕ್ಷಿತ ವೆಚ್ಚಗಳಿಗೆ ಶೂನ್ಯ ತಯಾರಿ
    ತುರ್ತು ಸಂದರ್ಭ ಬಂದಾಗ ಕಗ್ಗತ್ತಲಲ್ಲಿ ನಿಲ್ಲಬೇಕಾಗುತ್ತದೆ – ಕಾರಣ, ಯಾವುದೇ ಹಣದ ಯೋಜನೆಯಿಲ್ಲ.

ಈ ಹವ್ಯಾಸವನ್ನು ಬದಲಾಯಿಸಲು ಸರಳ ತಂತ್ರಗಳು:
  1. ತಿಂಗಳ ಆದಾಯ ಮತ್ತು ಖರ್ಚು ಪಟ್ಟಿ ಮಾಡಿ
    ಎಷ್ಟು ಬರ್ತಿದೆ, ಎಲ್ಲಿ ಹೊರಡುತ್ತಿದೆ – ಇವನ್ನು ಸರಳವಾಗಿ ಕಾಗದ/ಮೊಬೈಲ್‌ಲ್ಲಿ ಬರೆದುಕೊಳ್ಳಿ.

  2. ಅನುಮಾನದ ಬಜೆಟ್ ಮಾಡಿ, ನಂತರ ವಾಸ್ತವದ ಜೊತೆ ಹೋಲಿಸಿ
    ಉದಾ: ತಿಂಗಳ ಬೆಳಗ್ಗೆ ₹೨,೦೦೦ ಊಟಕ್ಕೆ ಅಂತನೀವು ಪ್ಲಾನ್ ಮಾಡಿದ್ದರೆ, ತಿಂಗಳ ಕೊನೆಯಲ್ಲಿ ಎಷ್ಟು ಖರ್ಚಾಯಿತೋ ನೋಡಿ.

  3. ಒಂದು ಚಿಕ್ಕ ಅಪ್ ಅಥವಾ ಗೂಗಲ್ ಶೀಟ್ ಬಳಸಿ
    ‘Walnut’, ‘Money Manager’, ಅಥವಾ ಸಿಂಪಲ್ spreadsheet ಬಳಸಿ ದಿನದ ಖರ್ಚುಗಳು ದಾಖಲಿಸಿ.

  4. ಬಜೆಟ್‌ನಲ್ಲಿಯೇ ಖುಷಿ ಹುಡುಕುವ ಅಭ್ಯಾಸ ಬೆಳೆಸಿಕೊಳ್ಳಿ
    ಬಜೆಟ್ ಅಂದರೆ ನಿರಾಕರಣೆ ಅಲ್ಲ; ಇದು ನಿಮ್ಮ ಹಣದ ಮೇಲೆ ನಿಮಗಿರುವ ನಿಯಂತ್ರಣ. ಇದು ನಿಮಗೆ ಶಾಂತಿ ಕೊಡುವ ಪಥ.

ಬಜೆಟ್ ಎಂಬುದು ನಿಮ್ಮ ಹಣದ ಮೇಲೆ ನಿಯಂತ್ರಣ ಸಾಧಿಸುವ ಮೊದಲ ಹೆಜ್ಜೆ. ಇದು ನಿಮ್ಮ ಆದಾಯವನ್ನು ಅರ್ಥಪೂರ್ಣವಾಗಿ ಬಳಸಿ, ಆರ್ಥಿಕ ಗುರಿಗಳನ್ನು ಸಾಧಿಸಲು ದಾರಿ ತೋರಿಸುವ ಪಥದೀಪ. ಇವತ್ತು ಕೇವಲ ಹತ್ತು ನಿಮಿಷ ತೆಗೆದುಕೊಂಡು, ನಿಮ್ಮ ತಿಂಗಳ ಖರ್ಚುಗಳ ಪಟ್ಟಿ ಮಾಡಿ ನೋಡಿ — ಆ ಕೆಲವೊಂದು ಸಾಲುಗಳು ನಿಮ್ಮ ಜೀವನವನ್ನೇ ತಿರುವುಮಾಡಬಲ್ಲವು.

ಬಜೆಟ್ ತಯಾರಿಸುವುದು ಇತ್ತೀಚಿನ ಆರ್ಥಿಕ ತುರ್ತು ಸ್ಥಿತಿಗಳ ಪರಿಹಾರವಲ್ಲ, ಅದು ಆ ಸ್ಥಿತಿಯೇ ಬಾರದಂತೆ ಮಾಡುವ ಮುಂಜಾಗ್ರತಾ ಕ್ರಮ.

ಹವ್ಯಾಸ -6: ಹಣದ ಬಗ್ಗೆ ತಪ್ಪು ನಂಬಿಕೆಗಳು

“ಹಣದಲ್ಲಿ ಏನು ಇದೆ?”, “ಹಣ ಬಂದರೆ ಸುಖ ಹೋಗುತ್ತೆ”, “ನನ್ನ ಹೆತ್ತವರು ಬಡವರು. ಅದಕ್ಕೆ ನಾನು ಬಡವ”, “ಅತಿಯಾದ ಹಣ ಇದ್ದರೆ ಅಹಂಕಾರ ಬರುತ್ತೆ.” ಈ ಎಲ್ಲ ನಂಬಿಕೆಗಳು ಸತ್ಯವಲ್ಲ. ಆದರೆ ಬಹುತೇಕ ಜನ ಅವುಗಳನ್ನು ಜೀವನದ ನಿಯಮಗಳಾಗಿ ನಂಬಿರುತ್ತಾರೆ.

ಹಣದ ಬಗ್ಗೆ ನಮ್ಮ ಸಮಾಜದಲ್ಲಿ ಹಬ್ಬಿರುವ ಹಲವು ನಂಬಿಕೆಗಳು ನಮ್ಮ ಹಣಕಾಸಿನ ಬೆಳವಣಿಗೆಗೆ ಅಡ್ಡಿಯಾಗುತ್ತವೆ. ಇವು ಯಾವುದೇ ಲಾಜಿಕ್ ಅಥವಾ ಅನುಭವಕ್ಕೆ ಆಧಾರವಿಲ್ಲದೆ ಪೀಳಿಗೆಗಳಿಂದ ಪೀಳಿಗೆಗೆ ಸಾಗುತ್ತಿವೆ.

ಈ ನಂಬಿಕೆಗಳಿಂದ ಮುಕ್ತಗೊಳ್ಳುವ ಮಾರ್ಗಗಳು:

  • ಹಣದ ವಿಷಯದಲ್ಲಿ ಮಾಹಿತಿ ಪಡೆದು ನಿರ್ಧಾರ ಮಾಡಿ
    – ಬಂಡವಾಳ ಮಾಡುವದು, ತೆರಿಗೆ ನಿರ್ವಹಣೆ, ಸಾಲ ತೀರುವುದು, ಉಳಿತಾಯ ಗುರಿ ಇಡುವದು ಎಲ್ಲವನ್ನೂ ಕಲಿಯಿರಿ.

  • ನಿಮ್ಮ ಪಾರಂಪರಿಕ ನಂಬಿಕೆಗಳನ್ನು ಪ್ರಶ್ನಿಸಿ
    – “ನಮ್ಮ ಮನೆಯಲ್ಲಿ ಹೀಗಾಗುತ್ತೆ”, “ಅವರು ಹೀಗೆ ಹೇಳಿದ್ದರು” ಎಂಬ ವಾಕ್ಯಗಳ ಹಿಂದಿದ್ದ ತರ್ಕ ಪರೀಕ್ಷಿಸಿ.

  • ಹಣವನ್ನು ಭಯದಿಂದ ನೋಡುವ ಬದಲು ಪ್ರೀತಿಯಿಂದ ನಿರ್ವಹಿಸಿ
    – ಹಣ ನಿಮ್ಮ ಜೀವನದ ಶಕ್ತಿ — ಅದನ್ನು ಪೋಷಿಸಿ, ಶಿಸ್ತಿನಿಂದ ಬಳಸಿ.

  • ಸಕಾರಾತ್ಮಕ ಹಣದ ಮಾದರಿಗಳನ್ನು ನೋಡಿ ಕಲಿಯಿರಿ
    – ವ್ಯವಹಾರಿಕ ವ್ಯಕ್ತಿಗಳು, ಹಣ ಸಂಪಾದನೆ ಮಾಡಿಕೊಂಡವರು ಹೇಗೆ ಆಲೋಚಿಸುತ್ತಾರೆ ಎಂಬುದನ್ನು ಕಲಿಯಿರಿ.

 

ಇವತ್ತು ನೀವು ಹಣದ ಬಗ್ಗೆ ಯಾವ ನಂಬಿಕೆಯಿಂದ ಬದುಕುತ್ತಿದ್ದೀರೋ, ಅದೇ ನಾಳೆ ನಿಮ್ಮ ಜೀವನದ ಸ್ಥಿತಿಗತಿಯನ್ನೂ ನಿರ್ಧರಿಸುತ್ತದೆ.  ಈ ಕ್ಷಣದಿಂದಲೇ ಆ ತಪ್ಪು ನಂಬಿಕೆಗಳನ್ನು ಪ್ರಶ್ನಿಸಿ, ಭೇದಿಸಿ, ಮುರಿದುಹಾಕಿ. ನೀವು ಹಣವನ್ನು ತಿರಸ್ಕರಿಸದೇ, ಅದನ್ನು ಸಮರ್ಥವಾಗಿ ಸ್ವೀಕರಿಸಿದಾಗ — ನಿಜವಾದ ಆರ್ಥಿಕ ಸ್ವಾತಂತ್ರ್ಯ ಆರಂಭವಾಗುತ್ತದೆ.

ಹವ್ಯಾಸ -7: ಹಣಕಾಸು ಶಿಕ್ಷಣದ ಕೊರತೆ

ನಾವು ಶಾಲೆ-ಕಾಲೇಜುಗಳಲ್ಲಿ ಗಣಿತ, ವಿಜ್ಞಾನ, ಇತಿಹಾಸ ಎಲ್ಲವನ್ನೂ ಕಲಿಯುತ್ತೇವೆ — ಆದರೆ ಜೀವನದಲ್ಲಿ ಪ್ರತಿದಿನ ಎದುರಾಗುವ ಹಣದ ನಿರ್ವಹಣೆ, ಉಳಿತಾಯ, ಬಡ್ಡಿ, ಸಾಲ, ಹೂಡಿಕೆ, ಕ್ರೆಡಿಟ್ ಸ್ಕೋರ್ ಹೀಗೆ ನೂರು ಹಣಕಾಸಿನ ಸಂಗತಿಗಳ ಬಗ್ಗೆ ಔಪಚಾರಿಕ ಶಿಕ್ಷಣವೇ ಇಲ್ಲ!

“ಸಾಲ ಬಾರದಂತೆ ಹೇಗೆ ಬದುಕಬೇಕು?”,
“ಬಡ್ಡಿ ಅಂದ್ರೆ ಏನು?”,
“EMI ಅನ್ನು ಹೇಗೆ ಮಿತಿಗೊಳಿಸಬೇಕು?”,
“ಬಂಡವಾಳ ಹೂಡಿಕೆ ಹೇಗೆ ಮಾಡಬೇಕು?”
ಇವುಗಳನ್ನು ನಾವೆಲ್ಲಿ ಕಲಿತೇವೆ? ಯಾವ ಶಾಲೆ, ಕಾಲೇಜು ಹೇಳುತ್ತದೆ?

ನಿಜ ಹೇಳಬೇಕೆಂದರೆ — ಬಹುಪಾಲು ಜನರಿಗೆ ಸರಿಯಾದ ಆರ್ಥಿಕ ಶಿಕ್ಷಣವೇ ದೊರೆತಿಲ್ಲ.

ಈ ಕೊರತೆಯನ್ನು ನೀವೇ ಪೂರೈಸಿಕೊಳ್ಳುವ ಮಾರ್ಗಗಳು:
  1. ಆತ್ಮಶಿಕ್ಷಣವೇ ಮೊದಲ ಹಾದಿ
    ಈಗಿನ ಕಾಲದಲ್ಲಿ ಯಾವುದೇ ವಿಷಯಗಳು ತಿಳಿದುಕೊಳ್ಳಬೇಕೆಂದರೆ, ತುಂಬಾ ಸುಲಭವಾಗಿದೆ. ಆರ್ಥಿಕ ಶಿಕ್ಷಣ ಪಡೆಯುವದು ಸಹ ಅಷ್ಟೇ ಸುಲಭ. ಸಾಕಷ್ಟು ಬ್ಲಾಗ್, ಯೌಟ್ಯೂಬ್ ನಲ್ಲಿ ಶಿಕ್ಷಣ ಪಡೆಯಬಹುದು.

  2. ಮನೆಯಲ್ಲಿ ಹಣದ ಬಗ್ಗೆ ಪಾರದರ್ಶಕತೆ ಇರಲಿ.
    ನಿಮ್ಮ ದುಡಿಮೆ, ನಿಮ್ಮ ಸಾಲ, ನಿಮ್ಮ ಖರ್ಚು ವೆಚ್ಚಗಳ ಬಗ್ಗೆ ಮನೆಯವರೊಂದಿಗೆ ಚರ್ಚೆ ಮಾಡ್ತಾನೆ ಇರಿ. ಇದರಿಂದ ಹಣದ ನಿರ್ವಹಣೆ ಹೇಗೆ ಮಾಡಬಹುದು ಎಂಬುದರ ಬಗ್ಗೆ ಒಬ್ಬರಿಂದ ಒಬ್ಬರು ತಿಳಿದುಕೊಳ್ಳ ಬಹುದು ಹಾಗೆಯೆ ಧೃಢ ನಿರ್ಣಯ ತೆಗೆದುಕೊಳ್ಳ ಬಹುದು.

  3. ತಮ್ಮ ಮಕ್ಕಳಿಗೆ ಬೇಗನೆ ಆರ್ಥಿಕ ಶಿಕ್ಷಣದ ಪಾಠ ಕಲಿಸಿ
    ಮಕ್ಕಳಿಗೆ ತಿಳುವಳಿಕೆ ಬರುತ್ತಿದ್ದಂತೆ ಅವರಿಗೆ ಹಣದ ಪರಿಚಯ ಮಾಡಿಕೊಡಿ. ಅದರಬಗೆಗಿನ ಅರಿವು ಮೊದಲೇ ಮೂಡಿಸಿದರೆ ಮುಂದೆ ಮಕ್ಕಳು ಆರ್ಥಿಕ ನಿರ್ಣಯಗಳಿಗಾಗಿ ಪರದಾಟ ಪಡುವುದಿಲ್ಲ.

ಹಣಕಾಸು ಶಿಕ್ಷಣವಿಲ್ಲದ ಜೀವನವೆಂದರೆ – ನಕ್ಷೆ ಇಲ್ಲದ ಸಮುದ್ರಯಾನ. ಇದರಲ್ಲಿ ಬಹಳಷ್ಟು ಜನರ ಜೀವನವೇ ಕೊಚ್ಚಿ ಹೋಗಿದೆ.

ಹಣ ನಮ್ಮ ದಾಸನಾಗಬೇಕಾದರೆ, ನಾವು ಅದರ ಗುರುವಾಗಬೇಕು. ಅದಕ್ಕೆ ಅದರ ಅರಿವು ಬಹುಮುಖ್ಯ.

ಸಮಾಪನೆ:

ಹಣ ನಷ್ಟಮಾಡುವ ಹವ್ಯಾಸಗಳು ಹೊಸದಾಗಿಲ್ಲ. ಅವು ನಿಶ್ಶಬ್ದವಾಗಿಯೇ ನಿಮ್ಮ ಬದುಕಿನೊಳಗೆ ಕಾಲಿಡುತ್ತವೆ — ನಿಮ್ಮ ಆದಾಯದ, ಆವಶ್ಯಕತೆಗಳ, ಭವಿಷ್ಯದ ಕನಸುಗಳ ಮಧ್ಯೆ ತಡೆಹಿಡಿಯಲಾಗದ ಅಡೆತಡೆಗಳಾಗಿ ರೂಪಾಂತರಗೊಳ್ಳುತ್ತವೆ.

ಈ 7 ಹವ್ಯಾಸಗಳನ್ನು ಗುರುತಿಸುವುದು ಸ್ವಲ್ಪ ನೋವುಕೊಡುವ ಸಾಹಸವೇ ಸರಿ, ಆದರೆ ಇದರ ಫಲ ನಿಜವಾಗಿಯೂ ಮೌಲ್ಯಯುಕ್ತ. ಈ ಲೇಖನ ನಿಮ್ಮನ್ನು ನಿಮ್ಮ ಹಣದ ನಿರ್ವಹಣೆಯತ್ತ ಇನ್ನಷ್ಟು ಜವಾಬ್ದಾರಿಯುತ ರೀತಿಯಲ್ಲಿ ಕರೆದೊಯ್ಯಬೇಕು ಎಂಬುದು ನನ್ನ ಉದ್ದೇಶ.

ಈ ಹಣ ಬರಹ ನಿಮ್ಮವರೊಂದಿಗೆ ಹಂಚಿಕೊಳ್ಳಿ

Most Recent Articles

eBook App for FREE

Lorem Ipsum is simply dumy text of the printing typesetting industry lorem.

ವರ್ಗ

ಮುಂದೆ ಓದಿ

  • All
  • ಹಣ ಮನ
ಬಾಹ್ಯವಾಗಿ ಚಿನ್ನದ ಸಂಪತ್ತು ಇದ್ದರೂ, ಅಂತರಂಗದಲ್ಲಿ ಹಣದ ಹವ್ಯಾಸಗಳ ಬಂಧನದಲ್ಲಿ ಸಿಕ್ಕಿಹಾಕಿಕೊಂಡವನು.

ಹಣ ಉಳಿಯುತ್ತಿಲ್ಲವೇ? ಈ ಲೇಖನದಲ್ಲಿ ನಿಮ್ಮ ಸಂಪತ್ತಿಗೆ ಅಡಚಣೆ ಮಾಡುವ 7 ಸಾಮಾನ್ಯ ಹವ್ಯಾಸಗಳನ್ನು ಗುರುತಿಸಿ, ಅವುಗಳಿಂದ ಮುಕ್ತವಾಗಲು ಸರಳ ಪರಿಹಾರಗಳನ್ನು ತಿಳಿಯಿರಿ.

ಮುಂದೆ ಓದಿ

No Posts Found!

© Hanabaraha.com. ಎಲ್ಲಾ ಹಕ್ಕುಗಳು ಕಾಯ್ದಿರಿಸಲಾಗಿದೆ.